Monday, 22 October 2012

ಹೀಗೊಂದು ಶಿಷ್ಯನ ಪುಟ್ಟ ಕಥೆ…

ಇದು ನಾನು ಬರೆದ ಮೊದಲ ಮೊದಲನೇ ಕಥೆ... ಆದರೆ ಇದಕ್ಕೂ ಮುಂಚೆ ಒಂದು ಕಥೆ ಬರೆದಿದ್ದೇನೆ... ಅದು ಪೂರ್ಣವಾಗುವುದಕ್ಕೆ ಇನ್ನು ಸ್ವಲ್ಪ ಬಾಕಿ ಇದೆ... ನಿಮ್ಮೆಲ್ಲರ ಪ್ರೋತ್ಸಾಹವಿದ್ದರೆ ಆದಷ್ಟು ಬೇಗ ಅದು ಸಿದ್ದವಾಗುತ್ತದೆ....


                   **********************************************************ಒಂದಾನೊಂದು ಕಾಲದಲ್ಲಿ ಒಂದು ಗುರುಕುಲವಿತ್ತು… ಆ ಗುರುಕುಲದಲ್ಲಿ ದಿಗಂತನೆಂಬ ಶಿಷ್ಯನಿದ್ದನು.....  ಆತನಿಗೆ ಬಿಲ್ಲುವಿದ್ಯೆಯೆಂದರೆ ಪಂಚಪ್ರಾಣ,ಜೀವನದಲ್ಲಿ ಮಹತ್ತರವಾದದ್ದನ್ನು ಸಾಧಿಸಬೇಕೆಂಬ ಆಕಾಂಷಿಯಾಗಿದ್ದನು…ಆದರೆ ಆತನ ಸ್ಥಿತಿಗತಿಗಳು ಅದಕ್ಕೆ ಪೂರಕವಾಗಿರಲಿಲ್ಲ… ಆದರೂ ಛಲ ಬಿಡದ ತ್ರಿವಿಕ್ರಮನಂತೆ ಮಾರುವೇಷ ಧರಿಸಿ ಗುರುಕುಲದಲ್ಲಿ ಬಿಲ್ಲುವಿದ್ಯೆಯನ್ನು ಕಲಿಯಲಾರಂಭಿಸಿದನು…

ಬಹಳ ಸೂಕ್ಷ ಜೀವಿಯಾದ ದಿಗಂತನಿಗೆ ಕಾಲನಂತರದಲ್ಲಿ ತನ್ನ ಮಾರುವೇಷದ  ಹಿಂದಿನ ಸತ್ಯ, ಯಾರಿಗೂ ಕೆಡಕನ್ನುಂಟು ಮಾಡದಿದ್ದರೂ ತನ್ನ ಗುರುಗಳ ಬಳಿಯೇ ಮರೆಮಾಚಿರುವುದು ಅಪರಾಧವೆಂಬ ಮನೋಭಾವ ಕಾಡಲಾರಂಭಿಸಿತು.. ಆದ್ದರಿಂದ ತನ್ನ ಮಾರುವೇಷದ ಹಿಂದಿನ ವೃತ್ತಾಂತವನ್ನೆಲ್ಲಾ ಚಾಚು ತಪ್ಪದೇ ತನ್ನ ಗುರುಗಳು ಹಾಗೂ ಕೆಲವು ಆಪ್ತ ಸಹಚರರ ಬಳಿ ಹೇಳಿಕೊಂಡನು… ಆರಂಭದಲ್ಲಿ ಎಲ್ಲರೂ ಆತನನ್ನು ಪ್ರಶಂಶಿಸಿ, ಆತನಿಗೆ ಪ್ರೋತ್ಸಾಹಕರಾಗಿದ್ದರು… ದಿಗಂತನು ಸಹ ಗುರುಗಳು ಹಾಗೂ ತನ್ನ ಸಹಚರರ ಬಗ್ಗೆ ಅಪಾರವಾದ ಗೌರವ ಹಾಗೂ ಆತ್ಮೀಯತೆಯ ಭಾವನೆಯನ್ನು ತಳೆದಿದ್ದನು…

ಒಂದು ದಿನ ಗುರುಕುಲಕ್ಕೆ ಹೊಸ ಶಿಷ್ಯ “ ಚಂದ್ರನ”  ಆಗಮನವಾಯಿತು.. ಆತನ ನಡವಳಿಕೆ ಅಲ್ಪ ಪ್ರಮಾಣದಲ್ಲಿ ದಿಗಂತನನನ್ನೆ ಹೋಲುತ್ತಿತ್ತು… ದುರಾದೃಷ್ಟವಶಾತ್ ದಿಗಂತನಿಗೆ ಆ ಸಮಯದಲ್ಲೇ ತೊಡಕುಂಟಾಗಿ ಗುರುಕುಲಕ್ಕೆ ಬರಲಾಗಲಿಲ್ಲ… ಅಪನಂಬಿಕೆಯೆಂಬುದು ಮನುಷ್ಯನ ಸಹಜ ಗುಣ ಎಂಬಂತೆ ಗುರುಕುಲದಲ್ಲಿ ಚಂದ್ರನೇ ದಿಗಂತನೆಂಬ ಗಾಳಿ ಸುದ್ದಿ ಹರಡಲಾರಂಭವಾಯಿತು.. ಈ ವಿಷಯ ದಿಗಂತನಿಗೂ ಸಹ ತಿಳಿಯಿತು.. ಆದರೆ ದಿಗಂತ,  ಎಂತಹ ಗಾಳಿ ಸುದ್ದಿ ಹರಡಿದರೂ ಸಹ ನನ್ನ ಗುರುಗಳು ಹಾಗೂ ನನ್ನ ಆತ್ಮೀಯ ಸಹಚರರು ನನ್ನನ್ನು ನಂಬುತ್ತಾರೆ, ನನ್ನನ್ನು ಸಂದೇಹಿಸುವುದಿಲ್ಲವೆಂಬ ಅಚಲವಾದ ನಂಬಿಕೆಯನ್ನು ಹೊಂದಿದ್ದನು.

ನೀರಿನ ಗುಳ್ಳೆಯಂತೆ ದಿಗಂತನ ನಂಬಿಕೆ ಬಹುಕಾಲ ಉಳಿಯಲಿಲ್ಲ… ಒಮ್ಮೆ ದಿಗಂತ ಗುರುಕೂಲದಲ್ಲಿ ಪ್ರವೇಶಿಸುವುದಕ್ಕೂ  ಆತನ ಸಹಚರರು ದಿಗಂತನ ಬಗ್ಗೆ ಇಲ್ಲಸಲ್ಲದ್ದನ್ನು ಹೇಳುತ್ತಾ ತಮ್ಮ ಅನುಮಾನಗಳನ್ನು ಹೇಳಿಕೊಂಡರು. ಗುರುಗಳು ಸಹ ಅವರ  ಮಾತನ್ನು ಅನುಮೋದಿಸುತ್ತಾ, ತಾವು ಸಹ ದಿಗಂತನ ಬಗ್ಗೆ ಅನುಮಾನ ಪಡುತ್ತಾ, ಆತನನ್ನು ಸುಳ್ಳುಗಾರನೆಂದು ನಿಶ್ಚಯಿಸಿದರು… ಈ ಸುದ್ದಿಯನ್ನು ಕಿವಿಯಾರೇ ಕೇಳಿ ದಿಗಂತನ ಮನಸ್ಸಿಗೆ ಬಹು ದೊಡ್ಡ ಆಘಾತವಾಯಿತು… ಆತನ ಮನಸ್ಸಿನಲ್ಲಿ ತನ್ನವರ ಬಗ್ಗೆ ಕಟ್ಟಿದ್ದ ವಾತ್ಸಲ್ಯದ ಗೋಪುರ -ನಂಬಿಕೆಯ ಗೋಪುರಕ್ಕೆ ಪೆಟ್ಟಾಯಿತು… ಈ ಆಘಾತ ಆತನ ಬದುಕಿನ ಮಹತ್ತರವಾದ ಮಹತ್ವಾಕಾಂಕ್ಷೆಯ ಪಥವನ್ನೇ ಏರು-ಪೇರು ಮಾಡಿತು… ಆತನ ಬಿಲ್ಲುವಿದ್ಯೆಯು ಸಹ ಅರ್ಧಕ್ಕೆ ನಿಂತಿತು… ಆತನ ಮನಸ್ಥಿತಿ ತನ್ನವರ ಅಪನಂಬಿಕೆಯ ಕಹಿ ವಾಸ್ತವವನ್ನು ಒಪ್ಪಿಕೊಳ್ಳಲಾರದೇ,  ನೀರಿನಿಂದ ಹೊರತೆಗೆದ ಮೀನಿನಂತೆ ವಿಲ-ವಿಲನೇ ಒದ್ದಾಡತೊಡಗಿತು…

ಕಾಲಕ್ಕೆ ಎಲ್ಲವನ್ನು ಮರೆಸುವ ಶಕ್ತಿಯಿದೆಯಂತೆ….ಸಮುದ್ರ ಮಂಥನ ನಡೆದಾಗ ಹೇಗೆ ಹಾಲಾಹಾಲ ಮೊದಲು ಉಕ್ಕಿ, ನಂತರ ಅಮೃತಧಾರೆ ಹರಿಯಿತೋ ಹಾಗೇಯೇ ನಮ್ಮ ದಿಗಂತನ ಮನಸ್ಸು ಬಹಳ ದಿನವರೆಗೆ ಒದ್ದಾಡಿ(ಮಂಥನವಾಗಿ) ಕೊನೆಗೂ ತನ್ನ ಮನಸ್ಸನ್ನು ಸ್ಥಿಮಿತಕ್ಕೆ ತಂದುಕೊಂಡು, ತನ್ನ ಕಲಿಕೆಯನ್ನು ಮುಂದುವರೆಸಿದನು….

ಗುರುಗಳ ಹಿತವಚನದ ಪಾಠ ಆತನಿಗೆ ಇಲ್ಲಿ ಸಹಾಯಕವಾಯಿತು…. “ ಸಾಧನೆಯ ಪಥದಲ್ಲಿ ಧ್ಯೇಯ-ಗುರಿಯಷ್ಟೆ ನಮಗೆ ಮುಖ್ಯ… ಸಮಾಜದೊಂದಿಗೆ  ಭಾವನಾತ್ಮಕ ಬೆಸುಗೆಯಿರಬೇಕು  ಆದರೆ ಆ ಭಾವನಾತ್ಮಕ ಬೆಸುಗೆ ಮನಸ್ಸಿನ ನೆಮ್ಮದಿಯನ್ನೇ ಕಿತ್ತುಕೊಳ್ಳುವಂತಿರಬಾರದು….  ಬೆನ್ನ ಹಿಂದೆ ಆಡಿಕೊಳ್ಳುವುವವರ, ನಿಂದಿಸುವವರ  ಮಾತನ್ನೆಲ್ಲಾ ಗಣನೆಗೆ ತೆಗೆದುಕೊಳ್ಳಬಾರದು… ಪ್ರತಿ ವ್ಯಕ್ತಿಗಳಲ್ಲೂ ವಿಭಿನ್ನ ಗುಣಗಳಿರುತ್ತವೆ.. ನಾವು ಅವುಗಳಲ್ಲಿ ಒಳ್ಳೆಯದನ್ನು ಮಾತ್ರ ಆರಿಸಿಕೊಳ್ಳಬೇಕು…. ಸಾಧ್ಯವಾದರೆ ಅವರನ್ನು ಆಧರಿಸಬೇಕು… ಅದನ್ನು ಬಿಟ್ಟು ಅವರನ್ನು ನಿಂದಿಸುತ್ತಾ, ದ್ವೇಷಿಸುತ್ತಾ, ಕೊರಗುತ್ತಾ, ಅವರಿಗಾಗಿ ಪರಿತಾಪಿಸುತ್ತಾ ಹೋದರೆ ನಮ್ಮ ಮನಸ್ಥಿತಿಯೇ ಹಾಳಾಗುವುದು…. ತಮ್ಮ ಬಗ್ಗೆ ಆಡಿಕೊಳ್ಳುವವರ ಮಾತಿನಲ್ಲಿ ಎಷ್ಟು ಸತ್ಯ-ಸತ್ಯಾತೆಗಳಿವೆಯೆಂಬುದು ವಿಮರ್ಶಿಸಿ, ಅವುಗಳಲ್ಲಿ ತಮ್ಮದು ತಪ್ಪು ಇದೆಯೆಂದು ತಿಳಿದರೆ, ಅದನ್ನು ತಿದ್ದಿಕೊಂಡು ಮುಂದೆ ನಡೆಯಬೇಕು… ತಪ್ಪುಗಳಿಲ್ಲದ್ದದ್ದಲ್ಲಿ ಅವುಗಳನ್ನು ನಗಣ್ಯಿಸಬೇಕು.  ಸಾಧನೆಯ ಪಥದಲ್ಲಿ ಎಡವು-ತೊಡರುಗಳು ಸಹಜ… ಅವುಗಳನ್ನು ಮೆಟ್ಟಿನಿಲ್ಲಬೇಕು…    

                                                                                             ಸ್ನೇಹದಿಂದ ನಿಮ್ಮ ಗೆಳತಿ

                                                                                            *ಸ್ನೇಹಜೀವಿ-ಭಾವಜೀವಿ*

5 comments:

 1. ಫ್ರೆಂಡ್ ನಿಮ್ಮ ಮೊದಲ ಕಥೆಗೆ ಅಭಿನಂದನೆಗಳು...ಜೀವನ ಕನ್ನಡಿಯಂತೆ.ನಾವು ನಮ್ಮನ್ನು ನೋಡಿಕೊಳ್ಳುತ್ತಾ ತಿದ್ದಿಕೊಳ್ಳುತ್ತ ಸಾಗಬೇಕು..ನಮ್ಮ ಮನಸು ಕನ್ನಡಿಯ ಪ್ರತಿಬಿಂಬದಂತೆ.ಅದು ನಮ್ಮನ್ನು ಪ್ರತಿಫಲಿಸುತ್ತ ಇರುತ್ತದೆ..ಆ ಮನಸಿನ ಕನ್ನಡಿಗೆ ಟೀಕೆ ಟಿಪ್ಪಣಿ ಎಂಬ ಕಲ್ಲುಗಳಿಂದ ರಕ್ಷಿಸುತ್ತ ಇರಬೇಕು.ಸುಂದರವಾದ ಕಥೆ ಫ್ರೆಂಡ್...ಮುಂದುವರೆಸಿ ನಿಮ್ಮ ಪಯಣ.

  ReplyDelete
 2. ನಿಮ್ಮ ಪ್ರತಿಕ್ರಿಯೆಗೆ ತುಂಬು ಹೃದಯದ ಧನ್ಯವಾದಗಳು ಸರ್... ನಿಮ್ಮೆಲ್ಲರ ಪ್ರೋತ್ಸಾಹ ಹೀಗೇಯೇ ಇರಲಿ....

  ReplyDelete
 3. ಗಟ್ಟಿಯಾಗಿ ನಿಲ್ಲಬೇಕು. ಅದುವೇ ಬದುಕನ್ನು ಗೆಲ್ಲುವ ದಾರಿ. ಕತೆಯ ಮೂಲಕವೇ ಸಮಸ್ಯೆ ಹಾಗು ಪರಿಹಾರಗಳನ್ನು ಸೂಚಿಸುವ ನಿಮ್ಮ ಕಲೆ ಸೊಗಸಾಗಿದೆ.

  ReplyDelete
 4. ತಮ್ಮ ಪ್ರತಿಕ್ರಿಯೆಗೆ ದನ್ಯವಾದಗಳು ಸರ್.... ಎಲ್ಲಕ್ಕೂ ಮೊದಲು ನಿಮ್ಮ ಪ್ರೋತ್ಸಾಹವೇ ದೊಡ್ಡದ್ದು ಸರ್... ನಿಮ್ಮ ಎಲ್ಲಾ ಪ್ರತಿಕ್ರಿಯೆಗಳನ್ನು ಓದಿದ್ದೇನೆ...ನಿಮ್ಮ ಪ್ರೋತ್ಸಹದ ಕಲೆ ಚೆನ್ನಾಗಿದೆ.... ಎಲ್ಲರಿಗೂ ನಿಮ್ಮ ಪ್ರೋತ್ಸಾಹ ಸಿಗಲಿ...

  ReplyDelete
 5. ಸ್ನೇಹಾ ಸಿಸ್, ನನಗೆ ಇದರ ಹಿಂದಿರುವ "ಮರ್ಮ" ಅರ್ಥವಾಯಿತು, ಒಂದೇ ಏಟಿಗೆ 2 ಹಕ್ಕಿಗಳನ್ನ ಹೊಡೆಯುವ ನಿಮ್ಮ ಬರವಣಿಗೆಯ ಪರಿ, ನಿಜಕ್ಕೂ ಶ್ಲಾಘನೀಯ. ಯೋಚನೆ ಮಾಡಬೇಡಿ. ಕಾಲಾಯ ತಸ್ಮೈ ನಮಃ :-)
  ಗುರುಕುಲದ ಕಥೆ ಚೆನ್ನಾಗಿತ್ತು.

  ReplyDelete